ಸಂತ ಫಿಲೋಮಿನಾ ಕಾಲೇಜಿನಲ್ಲಿ ಪುಸ್ತಕ: ಓದು ಮತ್ತು ವಿಮರ್ಶೆ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸವು ನಮ್ಮಲ್ಲಿ ಜ್ಞಾನ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುವದರೊಂದಿಗೆ ಉತ್ತಮ ಭವಿಷ್ಯನಿರ್ಮಾನಕ್ಕೂ ಸಹಕಾರಿ ಆಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಅಜಕ್ಕಳ ಗಿರೀಶ ಭಟ್ ರವರು ಹೇಳಿದರು.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಸಾಹಿತ್ಯ ಸಂಘ ಇದರ ಸಹಯೋಗದಲ್ಲಿ ದಿನಾಂಕ 12.09.2013 ರಂದು ಕಾಲೇಜಿನಲ್ಲಿ ನಡೆದ ಪುಸ್ತಕ: ಓದು ಮತ್ತು ವಿಮರ್ಶೆ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರೊಂದಿಗೆ ಬರೆಯುವ ಮತ್ತು ಪ್ರಕಟಿಸುವ ಅಭ್ಯಾಸವನ್ನು ಸಹ ರೂಡಿಸಬೇಕು ಎಂದು ಅವರು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲರಾದ ಪ್ರೊ. ಲಿಯೋ ನೊರೋನ್ಹಾ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯ ಪುಸ್ತಕಳನ್ನು ಮಾತ್ರ ಓದದೆ ಉತ್ತಮ ಸಾಹಿತ್ಯ ಪುಸ್ತಕಳನ್ನು ಓದುವ ಹವ್ಯಾಸವನ್ನು  ಸಹ ಬೆಳೆಸಿಕೊಳ್ಳಬೇಕು. ಅದೇ ರೀತಿ ನಮಗೆ ಯಾವುದನ್ನು ಓದಬೇಕು ಮತ್ತು ಯಾವುದನ್ನು ಓದಬಾರದೆಂಬ ವಿವೇಕ ಇರಬೇಕು. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಪುಸ್ತಕಗಳನ್ನು ಹೆಚ್ಚು ಓದಬೇಕು ಎಂದರು.
ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಅಬ್ದುಲ್ ರಹ್‌ಮಾನ್ ಅತಿಥಿಗಳನ್ನು ಸ್ವಾಗತಿಸಿ ಅವರ ಪರಿಚಯ ಮಾಡಿಕೊಟ್ಟರು. ಸಾಹಿತ್ಯ ಸಂಘದ ಸಂಯೋಜಕರಾದ ಉಪನ್ಯಾಸಕ ಶ್ರೀ ಬಸ್ತ್ಯಾಂ ಪಾಯಿಸ್ ರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

×
Social Media Auto Publish Powered By : XYZScripts.com